ಅಹಿಂಸೆ

ಯಾರನ್ನೂ ಯಾವ ವಿಧದಲ್ಲೂ ನೋಯಿಸದೇ ಇರುವುದು. ಇದು ಮಾನವನ ನಡೆನುಡಿಗೆ ಸಂಬಂಧಿಸಿದ ಸದ್ಗುಣ. ಅಹಿಂಸೆ ಭಾರತ ದರ್ಶನ ಧರ್ಮಶಾಸ್ತ್ರಗಳಲ್ಲಿ ಪ್ರಧಾನ ಸ್ಥಾನ ಪಡೆದಿದೆ. ಇದರ ಪ್ರಪ್ರಥಮ ಉಲ್ಲೇಖ ಛಾಂದೋಗ್ಯ ಉಪನಿಷತ್ತಿನಲ್ಲಿ ಕಂಡುಬರುತ್ತದೆ. ತಪಸ್ಸು, ದಾನ, ಅರ್ಚನ, ಅಹಿಂಸಾ, ಸತ್ಯ ವಚನ-ಇವು ಯಜ್ಞದಲ್ಲಿ ನೀಡುವ ದಕ್ಷಿಣೆ. ಇದರ ಅಭಿಪ್ರಾಯವೇನೆಂದರೆ ಮಾನವನ ಒಂದು ಇಡೀ ಜಿವನವೇ ಒಂದು ಯಜ್ಞ. ಈ ಯಜ್ಞಕ್ಕೆ ಅಂಗವಾದ ದಕ್ಷಿಣೆ-ತಪಸ್ಸು, ದಾನ, ಋಜುತ್ವ, ಅಹಿಂಸೆ ಮತ್ತು ಸತ್ಯವಚನ. ಇಲ್ಲಿ ಲಕ್ಷಿಸಿರುವ ಆತ್ಮಗುಣಗಳಲ್ಲಿ ಅಹಿಂಸೆ ಒಂದಾಗಿದೆ. ಒಬ್ಬ ಯಹೋದ್ಯ ಪ್ರವಾದಿ `ನನಗೆ ಪಶುಯಜ್ಞಕ್ಕಿಂತಲೂ ಕರುಣೆಯೇ ಹೆಚ್ಚು ಇಷ್ಟ.' ಎನ್ನುತ್ತಾನೆ. ಮಹಾಭಾರತದ ಶಾಂತಿಪರ್ವ ಮೋಕ್ಷಧರ್ಮದಲ್ಲಿ ಅಹಿಂಸಾಧರ್ಮದ ಸವಿಸ್ತಾರವಾದ ಪ್ರಸ್ತಾಪವಿದೆ. ಅಹಿಂಸೆ ಇಲ್ಲಿ ಧರ್ಮಗಳ ಮೂಲವೆಂದು ಅದು ವರ್ಣಿಸುತ್ತದೆ. ಧರ್ಮಶಾಸ್ತ್ರಗಳೆಲ್ಲವೂ ಅಹಿಂಸೆಯ ಮಹತ್ವವನ್ನು ಸಾರಿವೆ.

ಜೈನಧರ್ಮವಂತೂ ಅಹಿಂಸಾಪರಮೋಧರ್ಮಃ ಎಂಬುದನ್ನು ಜೈನಧರ್ಮದ ಸಾರವೆಂದು ಹೇಳಿದೆ. ಗೌತಮಬುದ್ಧ ಅಹಿಂಸೆಯಿಂದಲೇ ಹಿಂಸೆಯನ್ನು ಗೆಲ್ಲಬೇಕೆಂದು ಬೋಧಿಸಿದ್ದಾನೆ. ಜೈನಧರ್ಮದ ಆಚಾರಾಂಗ ಸೂತ್ರ ಅಹಿಂಸೆಯನ್ನು ಒಂದು ವ್ರತವೆಂದು ಕರೆದಿದೆ. ಜೈನಯತಿಗಳು ಕೈಗೊಳ್ಳಬೇಕಾದ ವ್ರತದಲ್ಲಿ ಮೊದಲನೆಯದು ಅಹಿಂಸೆ. ಈ ವ್ರತದ ಆಚರಣೆ ಜೈನಯತಿಗಳ ಸಾಮಾನ್ಯ ಜೈನಧರ್ಮಾನುಯಾಯಿಗಳ ಆಚಾರ, ಅನುಷ್ಠಾನಗಳಲ್ಲಿ ಹೆಣೆದುಕೊಂಡಿದೆ. ಯಾವ ಪ್ರಾಣಿಯನ್ನೂ ಕೊಲ್ಲಬಾರದೆಂಬುದು ಈ ವ್ರತ. ಇದಕ್ಕಾಗಿ ಜೈನಯತಿಗಳು ಬಾಯನ್ನು ಬಟ್ಟೆಯಿಂದ ಮುಚ್ಚಿಕೊಳ್ಳತ್ತಾರೆ. ಕೈಯಲ್ಲಿ ಒಂದು ಸಣ್ಣ ಕೂರ್ಚವನ್ನು ಹಿಡಿದಿರುತ್ತಾರೆ. ತಾವೆಲ್ಲಾದರೂ ಕುಳಿತುಕೊಳ್ಳಬೇಕಾದಾಗ ಆ ಸ್ಥಳವನ್ನು ಮೆಲ್ಲನೆ ಗುಡಿಸಿಕೊಳ್ಳುತ್ತಾರೆ. ಸಾಮಾನ್ಯವಾಗಿ ಜೈನರೆಲ್ಲರೂ ಕತ್ತಲಾಗುವ ಮುನ್ನವೇ ಆಹಾರ ಸೇವನೆ ಮಾಡುತ್ತಾರೆ. ಕತ್ತಲೆಯಲ್ಲಿ ಕಾಣದೆ ಯಾವ ಕ್ರಿಮಿಕೀಟಗಳಿಗಾದರೂ ಹಿಂಸೆಯಾದೀತು ಎಂಬ ಭಯದಿಂದ.  

ಅಹಿಂಸೆಯನ್ನು ಸಾಧಾರಣವಾಗಿ ಎಲ್ಲ ಮತಪಂಥಗಳು ಒಂದಲ್ಲ ಒಂದು ರೀತಿಯಲ್ಲಿ ಅಂಗೀಕರಿಸಿವೆ ಎಂದು ಹೇಳಬಹುದು. ಅದನ್ನು ಅನುಷ್ಠಾನದಲ್ಲಿ ತರುವುದು ಕಷ್ಟವಾದರೂ ಅದು ನಾವು ಮುಟ್ಟಬೇಕಾದ ಗುರಿ ಎಂಬುದನ್ನು ಒಪ್ಪುತ್ತವೆ. ಬೌದ್ಧಭಿಕ್ಷುಗಳಿಗೆ ನಿಯಮಿಸಲ್ಪಟ್ಟ ಹತ್ತು ಸಖ್ಕಾಪದಾನಿ ಅಂದರೆ ಶಿಕ್ಷಾಪದಗಳಲ್ಲಿ ಅಹಿಂಸೆ ಮೊದಲನೆಯದು. ಅಶೋಕ ಅಹಿಂಸೆಯನ್ನು ತನ್ನ ಮೊದಲನೆಯ ಮತ್ತು ಎರಡನೆಯ ಶಾಸನಗಳ ವಿಷಯವನ್ನಾಗಿ ಮಾಡಿದ್ದಾನೆ. ಇದನ್ನು ಜನರಿಗೆಲ್ಲರಿಗೂ ಬೋಧಿಸುವದೇ ಅವನ ಉದ್ಧೇಶವಾಗಿತ್ತು. ಪ್ರಾಣಿ ದಯೆಗೆ ಅಶೋಕ ಕೊಟ್ಟ ಪ್ರಾಶಸ್ತ್ಯ ಈ ಅಹಿಂಸಾತತ್ತ್ವದಿಂದ ಹೊರಹೊಮ್ಮಿತು. ಅಹಿಂಸೆಯ ಆಚರಣೆಯ ಒಂದು ಪರಿಣಾಮ ಮಾಂಸಾಹಾರವರ್ಜನೆ ಮತ್ತು ಶಾಖಾಹಾರದ ಅವಲಂಬನೆ. ಭಾರತದಲ್ಲಿ ಶಾಖಾಹಾರಿಗಳ ಸಂಖ್ಯೆ ಎಲ್ಲ ದೇಶಗಳಿಗಿಂತಲೂ ಹೆಚ್ಚು. 

ಅಹಿಂಸಾತತ್ತ್ವದ ಅಂಗೀಕಾರದಿಂದ ಯಜ್ಞಯಾಗಗಳಲ್ಲಿ ಪಶುವಧೆ ಮಾಡುತ್ತಿದ್ದುದು ತಪ್ಪಿತು.
ಗಾಂಧೀಜಿಯವರ ಮಾತುಗಳಲ್ಲಿ ಅಹಿಂಸೆ ಹಿಮಾಲಯದಷ್ಟೇ ಪುರಾತನವಾದುದು. ಮಾನವ ಪ್ರಾರಂಭದಲ್ಲಿ ಹಿಂಸೆಯಿಂದಲೇ ಜೀವಿಸುತ್ತಿದ್ದ. ಕ್ರಮೇಣ ವ್ಯವಸಾಯ, ನಾಗರಿಕತೆ ಬೆಳೆದಂತೆ ಹಿಂಸಾವೃತ್ತಿಯಿಂದ ಬದುಕುವ ಪ್ರವೃತ್ತಿಯನ್ನು ಕಡಿಮೆಮಾಡಿಕೊಳ್ಳುತ್ತ ಬಂದ. 

ಬದುಕು ಅಹಿಂಸೆಯ ಪ್ರತೀಕವಲ್ಲ. ಎಲ್ಲ ಜೀವಜಂತುಗಳು ಹಿಂಸಾತ್ಮಕ ಕ್ರಿಯೆಗಳಿಂದಲೇ ಬದುಕುತ್ತವೆ. ಅಂತೆಯೇ ಮಾನವನ ಶ್ವಾಸೋಚ್ಛಾಸ ಕ್ರಿಯೆಯಲ್ಲಿ ಸೂಕ್ಷ್ಮಾಣುಗಳು ನಾಶವಾಗುತ್ತವೆ. ಉಸಿರಾಡದೆ ಮನುಷ್ಯ ಬದುಕಲಾರ. ಆದ್ದರಿಂದಲೇ ಅಹಿಂಸಾರಾಧಕ ಪುನರ್ಜನ್ಮದಿಂದ ಮುಕ್ತಿಯನ್ನು ಬಯಸುತ್ತಾನೆ. 

ಪಾರಮಾರ್ಥಿಕ ದೃಷ್ಟಿಯಿಂದ ಸಕಲ ಜೀವಜಂತುಗಳೂ ದೈವಾಂಶಸಂಭೂತವಾದುವು. ಎಲ್ಲದರಲ್ಲೂ ಅವಿರ್ಭೂತವಾಗಿರುವುದು ಒಂದೇ ಅವಿಭಾಜ್ಯ ಆತ್ಮ. ಆದ್ದರಿಂದ ಯಾರಿಗೆ ಹಿಂಸೆ ಮಾಡಿದರೂ ಪರಮಾತ್ಮನ ಅಂಶಕ್ಕೆ ಹಿಂಸೆ ಮಾಡಿದಂತೆಯೇ ಆಗುತ್ತದೆ. ಈ ದೃಷ್ಟಿಯಿಂದ ಹಿಂಸೆ ಸಲ್ಲದು. 

ಅಹಿಂಸೆಯ ಮಹತ್ವವನ್ನು ಹಿಂದಿನಿಂದ ಧರ್ಮಶಾಸ್ತ್ರಗಳು ಒತ್ತಿ ಹೇಳುತ್ತ ಬಂದವಾದರೂ ಬುದ್ಧ ಮತ್ತು ಮಹಾತ್ಮ ಗಾಂಧಿಯವರು ಅದು ಸಾಮಾನ್ಯರೂ ತಮ್ಮ ದೈನಂದಿನ ಜೀವನದಲ್ಲಿ ಪಾಲಿಸಬೇಕಾದ ಕರ್ತವ್ಯವೆಂಬುದನ್ನು ಸಾರಿ ಹೇಳಿದರು.
ವಸ್ತುತಃ ಅಹಿಂಸೆಯೆಂದರೆ ಕೊಲ್ಲದೇ ಇರುವುದು ಎಂದು ಮಾತ್ರ ಅರ್ಥವಲ್ಲ. ಕಾಯಾ, ವಾಚಾ, ಮನಸಾ ಇತರರಿಗೆ ನೋವನ್ನುಂಟುಮಾಡದಿರುವುದು ಅಹಿಂಸೆ. ಕೋಪದಿಂದ ಅಥವಾ ಸ್ವಾರ್ಥಕ್ಕಾಗಿ ಅಥವಾ ನೋವನ್ನುಂಟುಮಾಡುವ ಉದ್ದೇಶದಿಂದ ಹೆರರಿಗೆ ನೋವನ್ನುಂಟುಮಾಡುವುದು, ಪ್ರಾಣಾಪಹರಣ ಮಾಡುವುದು, ಹಿಂಸೆ ಎನಿಸುತ್ತದೆ. ಇವುಗಳನ್ನು ಮಾಡದಿರುವುದು ಅಹಿಂಸೆ. ಅತಿ ಆತುರ, ಅಸತ್ಯ, ದ್ವೇಷ, ಪರರಿಗೆ ಕೇಡುಬಯಸುವುದು-ಇವು ಅಹಿಂಸಾತತ್ತ್ವಕ್ಕೆ ಲೋಪತರುತ್ತವೆ ಎನ್ನುತ್ತಾರೆ ಗಾಂಧಿ.

ಹಿಂಸೆಯ ಮೂಲಕಾರಣ, ಮಹಾತ್ಮಾಗಾಂಧಿಯವರ ಅಭಿಪ್ರಾಯದಲ್ಲಿ, ಸ್ವಾರ್ಥ ಮತ್ತು ಸ್ವಹಿತ. ಸ್ವಹಿತ ಕುರುಡು. ಸ್ವಹಿತರಕ್ಷಣೆಗಾಗಿ ಮನುಷ್ಯ ಹಿಂಸಾಪ್ರವೃತ್ತನಾಗುತ್ತಾನೆ. ಆದ್ದರಿಂದ ನಿಜ ಅಹಿಂಸಾಸಾಧಕ ಸ್ವಾರ್ಥ ತೊರೆಯಬೇಕು.
ಬಹುಕಾಲದವರೆಗೆ ಧಾರ್ಮಿಕ ಮತ್ತು ಪಾರಮಾರ್ಥಿಕ ಕ್ಷೇತ್ರಕ್ಕೆ ಮೀಸಲಾಗಿ ಕೇವಲ ವೈಯಕ್ತಿಕ ಸಾಧನೆಯಾಗಿದ್ದ ಅಹಿಂಸೆಯನ್ನು ಬಹುಜನರಿಂದ ಸಾಮೂಹಿಕವಾಗಿ ಆಚರಿಸಲ್ಪಡಬಹುದಾದ ಶಕ್ತಿಯುತ ಅಸ್ತ್ರವನ್ನಾಗಿ ಪರಿವರ್ತಿಸಿದವರು ಗಾಂಧೀಜಿ.
ಸಮಾಜದಲ್ಲಿ ಶಾಂತಿಯುತ ಸಹಬಾಳ್ವೆ ಬಾಳುತ್ತ, ಈ ಸಹಬಾಳ್ವೆಯ ವ್ಯಾಪ್ತಿಯನ್ನು ವಿಸ್ತøತಗೊಳಿಸುತ್ತ ಎಲ್ಲ ಭಿನ್ನತೆಗಳನ್ನು ಶಾಂತಿಯುತ ವಿಚಾರವಿನಿಮಯ ಕ್ರಮದಿಂದ ಬಗೆಹರಿಸಿಕೊಳ್ಳುತ್ತ ಹೋಗುವುದು ಅಹಿಂಸಾ ಸಾಧನವೆನಿಸಿಕೊಳ್ಳುತ್ತದೆ. 
ಇಚ್ಛಾಪೂರ್ವಕ ಕಷ್ಟಸಹಿಷ್ಣುತೆಯೇ ಚೈತನ್ಯಪೂರ್ಣ ಅಹಿಂಸೆ. ಕೇಡಿಗನ ಇಚ್ಛೆಗೆ ಸೋತು ಮಣಿಯುವುದಲ್ಲ; ದಬ್ಬಾಳಿಕೆಯ ವಿರುದ್ಧ ಇಡೀ ಆತ್ಮವನ್ನೇ ಒಡ್ಡಿ ಹೋರಾಡುವುದು ತಪ್ಪಲ್ಲ.

ಪೂರ್ಣ ಅಹಿಂಸೆಯೆಂದರೆ ಪೂರ್ತಿಯಾಗಿ ಕೆಡುಕು ಮಾಸದಿರುವಿಕೆ. ಎಲ್ಲ ಜೀವರಾಶಿಗಳ ವಿಷಯದಲ್ಲಿ ಅವುಗಳಿಗೆ ಒಳ್ಳೆಯದಾಗಲೆಂದು ಆಶಿಸುವುದು. ಈ ನಿಯಮಕ್ಕೆ ಮನುಷ್ಯ ಮಾತ್ರನಲ್ಲದೆ ಕನಿಷ್ಠವಾದ ಎಲ್ಲ ತಿರ್ಯಗ್ಜಂತುಗಳೂ ಸೇರಿಕೊಳ್ಳುತ್ತವೆ.

ಅಹಿಂಸೆ ಹಿಂಸೆಗಿಂತ ಅಪಾರ ಮೇಲು; ಕ್ಷಮೆ ಶಿಕ್ಷೆಗಿಂತ ಹೆಚ್ಚು ಪೌರುಷಯುಕ್ತ ಎಂದು ಗಾಂಧೀಜಿಯವರ ನಂಬಿಕೆ. 
ಮಾನವ ಬುದ್ಧಿಜೀವಿ. ನಾನಾ ಕಾರಣಗಳಿಂದ ಭಿನ್ನತೆ ತಲೆಹಾಕಿದಾಗ ವಿಚಾರ, ಒಡಂಬಡಿಕೆ, ಮಧ್ಯಸ್ತಿಕೆ, ಇವುಗಳಿಂದ ಸಾಧ್ಯವಾಗದೇ ಹೋದರೆ, ಹಿಂಸೆಯ ಬಲಪ್ರಯೋಗದಿಂದ ಸರಿಪಡಿಸಿಕೊಳ್ಳಲು ಪ್ರಯತ್ನಿಸುವುದು ಪುರಾತನ ಕಾಲದಿಂದ ನಡೆದು ಬಂದಿದೆ. ಇದು ಮಾನವ ಗುಣಕ್ಕೆ ಸಲ್ಲದು. ವ್ಯಕ್ತಿ, ಸಮಾಜ, ರಾಷ್ಟ್ರ ಇವುಗಳು ಜಗಳ, ದೊಂಬಿ, ಯುದ್ಧಗಳ ಮೂಲಕ ತಮ್ಮ ವಾದವನ್ನು ಸಮರ್ಥಿಸಿಕೊಳ್ಳುವುದು ಅನೂಚಾನಮಾರ್ಗ. ಈ ಪಾಶವೀಮಾರ್ಗವನ್ನು ತೊರೆದು ಅಹಿಂಸಾಮಾರ್ಗದಿಂದ ಸರಿಪಡಿಸಿಕೊಳ್ಳಬೇಕೆಂಬ ಪ್ರಯತ್ನಗಳು ಆಗಿಂದಾಗ ಅಲ್ಪ ಸ್ವಲ್ಪ ನಡೆದಿರುತ್ತದೆ. ಚರಿತ್ರಾರ್ಹವಾದ ಕೆಲವು ನಿದರ್ಶನಗಳನ್ನು ಇಲ್ಲಿ ಕೊಡಲಾಗಿದೆ.

`ರಾಜ್ಯ ನಿಷ್ಠಾವಂತ ಕ್ರೈಸ್ತರ ಪೀಡೆ, ನಿಷ್ಠಾವಂತನಾದ ಕ್ರೈಸ್ತ ರಾಷ್ಟ್ರಕನಲ್ಲ. ರಾಜ್ಯಕ್ಕೆ ಅವನು ಸೇವೆ ಸಲ್ಲಿಸಬೇಕಾಗಿಲ್ಲ ಎಂಬ ಧೋರಣೆಯ ಮೇಲೆ ಅನಾಬ್ಯಾಪ್ಟಿಸ್ ಎಂಬ ಕ್ರೈಸ್ತ ಪಂಗಡದವರು 1527ರಲ್ಲಿ ಸ್ವಿಟ್ಜರ್‍ಲೆಂಡಿನಲ್ಲಿ ಒಂದು ಸಂಘವನ್ನು ಸ್ಥಾಪಿಸಿದರು. 1536ರಲ್ಲಿ ಮೆನ್ನೋಸೈಮನ್ಸ್ ಎಂಬುವವನು ಧರ್ಮಾಚರಣೆಗೆ ಸರ್ಕಾರ ಆತಂಕಪಡಿಸಬಾರದೆಂದು ಸರ್ಕಾರವನ್ನು ಪ್ರತಿಭಟಿಸತೊಡಗಿದ. ಮೆನ್ನೊನೈಟ್ಸ್, ನಸೈಮೊನಿಯನ್ಸ್ ಡಂಕರ್ಸ್ ಮೊದಲಾದ ಕ್ರೈಸ್ತ ಭಕ್ತರು ಸೇನೆಗೆ ಸೇರಬಾರದೆಂದು ತೀರ್ಮಾನಿಸಿ ಅನೇಕ ಅನಿಷ್ಟ ಪರಂಪರೆಗಳಿಗೆ ಗುರಿಯಾದರು. ಅನೇಕರು ಪ್ರಾಣ ತೆತ್ತರು. 1710ರಲ್ಲಿ ಹಲವರು ರಷ್ಯಕ್ಕೂ 1874ರಲ್ಲಿ ಹಲವರು ಅಮೇರಿಕೆಗೂ ಪಲಾಯನ ಮಾಡಿದರು. ರಾಜಕೀಯದಲ್ಲಿ ಭಾಗವಹಿಸಲು ನಿರಾಕರಿಸಿದ ಡಂಕರ್ಸ್ ಅಥವಾ ಜರ್ಮನಿಯ ಬ್ಯಾಪ್ಟಿಸ್ಟರು ದೇಶ ತೊರೆದು ಆರುಸಾವಿರ ಮೈಲಿಗಳ ದೂರದ ಪನ್ಸಿಲ್‍ವೇನಿಯಕ್ಕೆ 1720ರಲ್ಲಿ ಹೊರಟು ಹೋದರು.
1660ರಲ್ಲಿ ಜಾರ್ಜ್‍ಫ್ರಾಕ್ಸ್ ಎಂಬುವನು ಕ್ವೇಕರ್ ಸೊಸೈಟಿಯನ್ನು ಸ್ಥಾಪಿಸಿದ. ಪ್ರತಿಯೊಬ್ಬನು ತನ್ನ ಹೃದಯದಲ್ಲಿರುವ ಅಂತರ್‍ಜ್ಯೋತಿಯ ಅಣತಿಯಂತೆ ನಡೆದುಕೊಳ್ಳಬೇಕೆಂಬುದು ಈ ಸಂಘದ ಸಿದ್ಧಾಂತ. ರಾಜಕೀಯದಲ್ಲಿ ಭಾಗವಹಿಸಲು ಆತಂಕವಿಲ್ಲದಿದ್ದರೂ ಯುದ್ಧದಲ್ಲಿ ಭಾಗವಹಿಸಲು ಈ ಸಂಘ ಒಪ್ಪುತ್ತಿರಲಿಲ್ಲ. ಅಮೇರಿಕದ ಮೂಲನಿವಾಸಿಗಳ ವಿರುದ್ಧ ಶಸ್ತ್ರ ಬಳಸಲು ನಿರಾಕರಿಸಿ ಅನೇಕರು ಸೆರೆಮನೆ ಸೇರಿದರು. ಪೆನ್ಸಿಲ್‍ವೆನಿಯಾದಲ್ಲಿ ಸೈನ್ಯ ಬಲವಿಲ್ಲದ ಅಹಿಂಸೆಯ ಆಧಾರದ ರಾಜ್ಯ ಸ್ಥಾಪಿಸಿದರು. ದೇಹದ ರಕ್ತಮಾಂಸದಂತೆ ಮೂಲನಿವಾಸಿಗಳೊಡನೆ ಕೂಡಿ ಬಾಳಬೇಕು ಎಂದು ಒಪ್ಪಂದ ಮಾಡಿಕೊಂಡರು. 76 ವರ್ಷಗಳ ಕಾಲ ಅಹಿಂಸಾ ತತ್ತ್ವದ ಆಧಾರದ ಮೇಲೆ ಈ ರಾಜ್ಯ ಶಾಂತಿಯಿಂದ ಬಾಳಿತು. ಅನ್ಯರ ಪ್ರವೇಶದಿಂದ ರಾಜ್ಯ ಒಡೆದು ಹೋದಾಗಲೂ ಮೂಲನಿವಾಸಿಗಳು ಕ್ವೇಕರ್ ಗುಂಪಿಗೆ ಸೇರಿದವರ ಮೇಲೆ ಎಂದಿಗೂ ಕೈ ಎತ್ತಲಿಲ್ಲ.

ಡುಕೊಬಾರ್ಸೆ ಎಂಬುವರು ರಷ್ಯಾದ ಬುಡಕಟ್ಟಿನ ಜನ. ಪೂರ್ಣ ಶಾಂತಿವಾದಿಗಳೂ, ಸಸ್ಯಹಾರಿಗಳೂ, ಸನ್ಯಾಸಿಯ ತ್ಯಾಗಜೀವನವನ್ನು ಅಸುಸರಿಸುವವರು. ಇವರು ಪ್ರಾಣಿಹಿಂಸೆ ಮತ್ತು ಮಾಂಸಭಕ್ಷಣ ಪಾಪಕರವೆಂದು ದನಗಳನ್ನು ಕಾಡಿಗೆ ಅಟ್ಟಿ ನೇಗಿಲಿಗೆ ಹೆಗಲು ಕೊಟ್ಟು ತಾವೇ ಭೂಮಿ ಉಳುತ್ತಿದ್ದರು. ಹತ್ತೊಂಬತ್ತನೆಯ ಶತಮಾನದ ಆದಿಭಾಗದಲ್ಲಿ ಸೈನ್ಯದಲ್ಲಿ ಭಾಗವಹಿಸಲು ನಿರಾಕರಿಸಿ ಅನೇಕರು ಚಿತ್ರಹಿಂಸೆಗೆ ಗುರಿಯಾದರು. 1899ರಲ್ಲಿ ಅನೇಕರು ಕೆನಡ ದೇಶಕ್ಕೆ ವಲಸೆಹೋದರು. ಅಲ್ಲಿಯ ಸರ್ಕಾರಕ್ಕೂ ಇವರಿಗೂ ಘರ್ಷಣೆ ಆಗುತ್ತಲೇ ಇತ್ತು.

ಕ್ರಿ.ಪೂ. 250ರಲ್ಲಿ ಅಶೋಕ ಚಕ್ರವರ್ತಿ ಕಳಿಂಗ ರಾಜ್ಯವನ್ನು ಸ್ವಾಧೀನಪಡಿಸಿಕೊಳ್ಳಲು ಯುದ್ಧಮಾಡಿದ. ಈ ಯುದ್ಧದಲ್ಲಿ ಸಂಭವಿಸಿದ ಅಪಾರ ಪ್ರಾಣ ಹಾನಿಯಿಂದ ಮನನೊಂದು ಬೌದ್ಧಧರ್ಮ ಸ್ವೀಕರಿಸಿ ಶಾಂತಿದೂತನಾಗಿ, ಅಹಿಂಸೆಯ ಆಧಾರದ ಮೇಲೆ ರಾಜ್ಯಭಾರ ಮಾಡತೊಡಗಿದ.

ಕೇವಲ ಪರಮಾರ್ಥಿಕ ಮತ್ತು ಧಾರ್ಮಿಕ ಕ್ಷೇತ್ರಗಳಿಗೆ ಮೀಸಲಾಗಿದ್ದ ಮತ್ತು ವ್ಯಕ್ತಿಗುಣ ಸಂಜಾತವಾದ ಅಹಿಂಸೆ ಎಂಬುದು ರಾಜಕೀಯ, ಸಾಮಾಜಿಕ, ರಾಷ್ಟ್ರೀಯ, ಅಂತರರಾಷ್ಟ್ರೀಯ ಕ್ಷೇತ್ರಗಳಲ್ಲಿ, ಸಾಮೂಹಿಕವಾಗಿ ಆಚರಿಸಲು ಯೋಗ್ಯವಾದ ಅತ್ಯಂತ ಪರಿಣಾಮಕಾರಿ ಅಸ್ತ್ರ ಎಂದು ಜಗತ್ತಿಗೆ ತೋರಿಸಿಕೊಟ್ಟ ಕೀರ್ತಿ ಮಹಾತ್ಮ ಗಾಂಧಿಯಂಥವರಿಗೆ ಸಲ್ಲುತ್ತದೆ. `ನನ್ನ ಅರ್ಧಶತಮಾನದ ಅನುಭವದಲ್ಲಿ ಅಹಿಂಸೆಯಿಂದ ಪರಿಹಾರ ಪಡೆಯಲಾಗದ ಉದಾಹರಣೆಯೇ ಇಲ್ಲ ಎನ್ನುತ್ತಾರೆ ಗಾಂಧಿ. ಅವರ ಮಾತಿನಲ್ಲೇ ಹೇಳುವುದಾದರೆ ಮಾನವನ ಅಧೀನದಲ್ಲಿರುವ ಶಕ್ತಿಗಳೆಲ್ಲೆಲ್ಲ ಅಹಿಂಸೆ ಪರಮ ಶ್ರೇಷ್ಠವಾದುದು. ಮಾನವನ ಚಾತುರ್ಯದಿಂದ ನಿರ್ಮಿತವಾದ ಮಹಾ ಅಸ್ತ್ರಗಳಲ್ಲೆಲ್ಲಾ ಮಹತ್ತರವಾದುದು.'						   
(ವಿ.ಎಸ್.ಎನ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ